ಅಧಿಕಾರ ಪ್ರಾಬಲ್ಯವಾದ

ಪ್ರಜಾಪ್ರಭುತ್ವ ವಿಫಲವಾಗಿ ಸರ್ವಾಧಿಕಾರ ಪ್ರಭುತ್ವ ತಲೆಯೆತ್ತಿದಾಗ ಕಂಡುಬರುವ ರಾಜಕೀಯವ್ಯವಸ್ಥೆಗೆ ಈ ಹೆಸರಿದೆ. (ಅಥಾರಿಟೇರಿಯನಿಸಂ), ವಿಶ್ವದ ಮೊದಲ ಮಹಾಯುದ್ಧದ ತರುವಾಯ ಯೂರೋಪಿನಲ್ಲಿ ಅಲ್ಲಲ್ಲಿ ಇಂಥ ಪ್ರಭುತ್ವಗಳು ಕಾಣಿಸಿಕೊಂಡುವು. ಹೀಗಾಗಿ ಇಟಲಿಯಲ್ಲಿ ಪಾó್ಯಸಿಸ್ಸ್ ಆಳ್ವಿಕೆಯೂ ಜರ್ಮನಿಯಲ್ಲಿ ಹಿಟ್ಲರನ ಆಳ್ವಿಕೆಯೂ ರಷ್ಯದಲ್ಲಿ ಕಮ್ಯೂನಿಸ್ಟ್ ಆಳಿಕೆಯೂ ಬೇರೂರಿದುವು. ವಿಶ್ವದ ಎರಡನೆಯ ಮಹಾಯುದ್ಧದ ಅನಂತರ ಪ್ರಪಂಚದ ಅನೇಕ ಕಡೆಗಳಲ್ಲಿ ಈ ವಾದ ಆವಿರ್ಭವಿಸಿತು. ಚೀನ, ಬರ್ಮ, ಇಂಡೋನೇಷ್ಯ, ಈಜಿಪ್ಟ್, ಯುಗೋಸ್ಲೇವಿಯ, ಜಕೋಸ್ಲೊವೇಕಿಯ ಮೊದಲಾದ ದೇಶಗಳಲ್ಲಿ ಅಧಿಕಾರಪ್ರಾಬಲ್ಯವಾದ ತಲೆ ಎತ್ತಿತು.
	
ಒಂದು ದೇಶದ ರಾಜಕೀಯ ಅನಿಶ್ಚಿತತೆ, ಆರ್ಥಿಕಮುಗ್ಗಟ್ಟು, ದುರಾಡಳಿತ ಮುಂತಾದ ಸನ್ನಿವೇಶಗಳು ಸರ್ವಾಧಿಕಾರಪ್ರಭುತ್ವಕ್ಕೆ ನಾಂದಿಯಾಗಬಹುದು; ಮುರಿದುಬೀಳುತ್ತಿರುವ ಸಂವಿಧಾನವನ್ನು ಬದಿಗಿರಿಸಿ ಹೊಸರಾಜಕೀಯ ವ್ಯವಸ್ಥೆಯನ್ನು ರೂಪಿಸಿಕೊಂಡು ಮಹತ್ವಾಕಾಂಕ್ಷೆಯುಳ್ಳ ಜನ ತಮ್ಮ ಅಧಿಕಾರ ಸ್ಥಾಪಿಸಿಕೊಳ್ಳಬಹುದು. ಪ್ರಜಾಮುಖಂಡರೇ ಸರ್ವಾಧಿಕಾರಿಗಳಾಗಿ ಮುಂದೆ ಬರಬಹುದು; ಇಲ್ಲವೇ ಸೇನಾಧಿಪತಿಗಳು ತಾವೇ ಸರ್ಕಾರದ ಸೂತ್ರಗಳನ್ನು ಹಿಡಿದು ತಮ್ಮ ಪ್ರಭುತ್ವ ಸ್ಥಾಪಿಸಬಹುದು. ಮತ, ಧರ್ಮ, ಜಾತಿ ಮುಂತಾದ ಒಡಕುಗಳು ಹೆಚ್ಚಾಗಿರುವ, ಶಿಕ್ಷಣಾಭಾವವಿರುವ ಹಿಂದುಳಿದ ಸಮಾಜದಲ್ಲಿ ಸರ್ವಾಧಿಕಾರಪ್ರಭುತ್ವ ತಲೆ ಎತ್ತಿ ಬಹುದಿನ ಬಾಳಬಲ್ಲದು. ಜನರಲ್ಲಿ ಸ್ವಾತಂತ್ರ್ಯ ಪ್ರೇಮವಿರದಿದ್ದಲ್ಲಂತೂ ಸರ್ವಾಧಿಕಾರಿಗಳು ಅಡೆತಡೆಯಿಲ್ಲದೆ ಜನರ ಮೇಲೆ ಅಧಿಕಾರವನ್ನು ನಡೆಸಬಹುದು. ಸರ್ವಾಧಿಕಾರವೇರ್ಪಟ್ಟಮೇಲೆ ಸರ್ಕಾರಕ್ಕೆ ತಲೆಬಾಗಿ ನಡೆಯದ ವ್ಯಕ್ತಿ ಮತ್ತು ಪಕ್ಷಗಳನ್ನು ಹತ್ತಿಕ್ಕಲಾಗುವುದರಿಂದ ಪ್ರಜಾಸ್ವಾತಂತ್ರ್ಯ ಮಾಯವಾಗುತ್ತದೆ. ಸರ್ಕಾರದ ನೀತಿಗಳನ್ನು ಟೀಕಿಸುವ ಹಕ್ಕು ಪ್ರಜೆಗಳಿಗೆ ಇರುವುದಿಲ್ಲ. ಹೀಗಾಗಿ ಅಧಿಕಾರ ಪ್ರಾಬಲ್ಯವಾದವಿರುವಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕೆ ಎಡೆಯಿಲ್ಲ; ವ್ಯಕ್ತಿ ಮತ್ತು ಸಂಘಸ್ವಾತಂತ್ರ್ಯಗಳಿಗೆ ಅವಕಾಶವಿಲ್ಲ. ಕ್ರಾಂತಿಯಿಂದ ಮಾತ್ರ ಸರ್ಕಾರವನ್ನು ಬದಲಾಯಿಸಬೇಕಾಗುತ್ತದೆ. ಆದರೆ ಸರ್ವಾಧಿಕಾರ ಪ್ರಭುತ್ವದಲ್ಲಿ ಆಡಳಿತದಕ್ಷತೆಯುಂಟು. ಸರ್ಕಾರ ಜನರ ಆರ್ಥಿಕ ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಸಾಧ್ಯವಿದೆ. ಉದಾ: ಜರ್ಮನಿಯ ಆರ್ಥಿಕಸ್ಥಿತಿಯನ್ನು ಹಿಟ್ಲರ್ ಅಲ್ಪಕಾಲದಲ್ಲಿ ಯಶಸ್ವಿಯಾಗಿ ಸುಧಾರಿಸಿದ. ಅಧಿಕಾರವಾದ ಸಂವಿಧಾನಾತ್ಮಾಕ ಅಥವಾ ನೈತಿಕ ಪರಿಮಿತಿಗಳನ್ನು ಅಂಗೀಕರಿಸುವುದಿಲ್ಲ. ಅಧಿಕಾರದಲ್ಲಿರುವವರು ಹೇಳಿದ್ದೇ ಮಾತು; ನಡೆದದ್ದೇ ದಾರಿ. ಅವರ ಮಾತನ್ನಾಗಲೀ ಕೃತಿಯನ್ನಾಗಲೀ ಪ್ರಶ್ನಿಸುವಂತಿಲ್ಲ. ಪ್ರಜಾಸತ್ತಾತ್ಮಕರಾಜ್ಯದಲ್ಲಿ ಕೂಡ ಅಧಿಕಾರವನ್ನು ಚಲಾಯಿಸಬೇಕಾಗುತ್ತದೆ. ಆದರೆ ಇಲ್ಲಿ ಅಧಿಕಾರ ಚಲಾಯಿಸುವಾಗ ಸಂವಿಧಾನಾತ್ಮಕ ಅಥವಾ ಬೇರೆ ವಿಧವಾದ ಪರಿಮಿತಿಗಳನ್ನು ಗಮನಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಅಧಿಕಾರವಾದ ಪ್ರಜಾಪ್ರಭುತ್ವ ವಿರೋಧಿ.
	
ಸರ್ವಾಧಿಕಾರಿಗಳ ಆಳ್ವಿಕೆಯಿಂದ ತಾತ್ಕಾಲಿಕಪರಿಹಾರ ದೊರೆತರೂ ಜನರ ಸ್ವಾತಂತ್ರ್ಯದಾಹವನ್ನು ಅನಂತಕಾಲ ಹತ್ತಿಕ್ಕಲು ಸಾಧ್ಯವಿಲ್ಲ. ಮುಸಲೋನಿ ಮತ್ತು ಹಿಟ್ಲರನ ಪ್ರಭುತ್ವಗಳೂ ಕಡೆಗೊಮ್ಮೆ ಕುಸಿದುಬಿದ್ದುವು. ಸೋವಿಯತ್ ರಷ್ಯದಲ್ಲಿ ಸ್ಟಾಲಿನ್ ಮೊದಲಾದ ಸರ್ವಾಧಿಕಾರಿಗಳು ಪ್ರಬಲವಾದ ಪ್ರಭುತ್ವವನ್ನು ರಚಿಸಿ ಅಧಿಕಾರ ನಡೆಸಿ ಯಶಸ್ವಿಯಾಗಿರುವುದು ನಿಜವಾದರೂ ಆ ದೇಶದ ಭವಿಷ್ಯ ಕಾದು ನೋಡಬೇಕಾದ್ದಿದೆ. ಏನೇ ಆಗಲಿ ವ್ಯಕ್ತಿಯ ಆರೋಗ್ಯ ಕೆಟ್ಟಾಗ ಮರಳಿ ತನ್ನ ಆರೋಗ್ಯವನ್ನು ಪಡೆಯುವ ತನಕ ತಾತ್ಕಾಲಿಕ ಸ್ಥಿತ್ಯಂತರವನ್ನು ಅನುಭವಿಸುವಂತೆ ಒಂದು ಸಮಾಜದ ಪರಿಸ್ಥಿತಿ ಕೆಟ್ಟಾಗ ಸರ್ವಾಧಿಕಾರ ಪ್ರಭುತ್ವದ ಮರೆಹೋಗಬೇಕಾಗಬಹುದು. ಆದರೆ ಅದು ಶಾಶ್ವತ ವ್ಯವಸ್ಥೆಯಾಗಲಾರದು.							
(ಜಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ